ಸಮಗ್ರ ಮತದಾರರ ಪರಿಷ್ಕರಣೆ ಕುರಿತು ಜಾಗೃತಿ: ಜೂನ್ 30ರಿಂದ ಮನೆ-ಮನೆ ಭೇಟಿ ಆರಂಭ

ಸಮಗ್ರ ಮತದಾರರ ಪರಿಷ್ಕರಣೆ ಕುರಿತು ಜಾಗೃತಿ: ಜೂನ್ 30ರಿಂದ ಮನೆ-ಮನೆ ಭೇಟಿ ಆರಂಭ

ಸಕಲೇಶಪುರ : ಸಮಗ್ರ ಮತದಾರರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ರಮದ ಅಂಗವಾಗಿ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶತಕುಮಾರಿ ತಿಳಿಸಿದರು.ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಮಗ್ರ ಮತದಾರರ ಪರಿಷ್ಕರಣೆ ಕುರಿತ ತರಬೇತಿ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಗ್ರ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಮಾಸ್ಟರ್ ಟ್ರೈನರ್‌ಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಜೂನ್ 30ರಿಂದ ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿ ಎಣಿಕೆ ನಮೂನೆಗಳನ್ನು (Enumeration Forms) ವಿತರಿಸಲಿದ್ದಾರೆ.ನಮೂನೆಗಳನ್ನು ಎರಡು ಪ್ರತಿಗಳಲ್ಲಿ ನೀಡಲಾಗುವುದು. ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಹಿ ಮಾಡಿದ ಒಂದು ಪ್ರತಿಯನ್ನು ಬಿಎಲ್ಒಗಳಿಗೆ ಸಲ್ಲಿಸಬೇಕು ಹಾಗೂ ಮತ್ತೊಂದು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಜೊತೆಗೆ ಇತ್ತೀಚಿನ ಭಾವಚಿತ್ರವನ್ನೂ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದರು.ಭೂಕುಸಿತ ತಡೆಗೆ 64 ಕಾಮಗಾರಿಗಳು:ಮಳೆಗಾಲದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಭೂಕುಸಿತ ತಡೆಗಟ್ಟಲು ಇದುವರೆಗೆ ಸುಮಾರು 64 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಮಂಜರಾಬಾದ್ ಕೋಟೆ ಸಮೀಪದ ರಸ್ತೆ ಕಾಮಗಾರಿ ಉತ್ತಮವಾಗಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿದೆ ಎಂದರು.ತಡೆಗೋಡೆಗಳು ಹಾಗೂ ಗ್ಯಾಬಿಯನ್ ಗೋಡೆಗಳ ನಿರ್ಮಾಣ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದ್ದು, ಆನೆಮಾಳು ಸೇರಿದಂತೆ ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ಆನೆಮಹಲ್ ಪ್ರದೇಶದ ಮೇಲೆ ವಿಶೇಷ ನಿಗಾ:ಆನೆಮಾಳು ಪ್ರದೇಶದಲ್ಲಿ ಕಳೆದ ವರ್ಷ ಭೂಕುಸಿತದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಆನೆಮಾಳಿನಿಂದ ಮಾರನಹಳ್ಳಿವರೆಗಿನ ವಿವಿಧ ಕಾಮಗಾರಿಗಳೂ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.ಎತ್ತಿನಹೊಳೆ ಯೋಜನೆಗೆ ಚಾಲನೆ:ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜೂನ್ 15ರಿಂದ ಅಕ್ಟೋಬರ್ 30ರವರೆಗೆ ನೀರನ್ನು ಎತ್ತುವ (ಲಿಫ್ಟಿಂಗ್) ಕಾರ್ಯ ನಡೆಯಲಿದ್ದು, ಯೋಜನೆಗೆ ಸಂಬಂಧಿಸಿದ ಪಂಪ್‌ಗಳು ಹಾಗೂ ಮೋಟಾರ್‌ಗಳ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಯೋಜನೆಯ ವಿವಿಧ ಕೇಂದ್ರಗಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ನೀರು ಎತ್ತುವ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!