ನವದೆಹಲಿ / ಸಕಲೇಶಪುರ : ಬೆಂಗಳೂರು–ಹಾಸನ ನಡುವೆ ಸಂಚರಿಸುತ್ತಿರುವ ಟ್ರೈನ್ ನಂ. 06583/06584 ಕೆಎಸ್‌ಆರ್ ಬೆಂಗಳೂರು–ಹಾಸನ ಮೆಮು ಸ್ಪೆಷಲ್ ರೈಲು ಸೇವೆಯನ್ನು ಸಕಲೇಶಪುರ ರೈಲು ನಿಲ್ದಾಣದವರೆಗೆ ವಿಸ್ತರಿಸುವಂತೆ ಶಾಸಕ ಸಿಮೆಂಟ್ ಮಂಜು ಅವರು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ಸಕಲೇಶಪುರ ಹಾಗೂ ಆಲೂರು ತಾಲ್ಲೂಕಿನ ಸಾರ್ವಜನಿಕರ ಬಹುಕಾಲದ ಬೇಡಿಕೆಗಳ ಜೊತೆಗೆ ವಿವಿಧ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರವಾದ ಮನವಿ ಪತ್ರವನ್ನು ಸಲ್ಲಿಸಿದರು.ಮನವಿಯಲ್ಲಿ, ಸಕಲೇಶಪುರ ಹಾಗೂ ಆಲೂರು ಭಾಗಗಳು ಭೌಗೋಳಿಕವಾಗಿ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳನ್ನು ಒಳಗೊಂಡಿದ್ದು, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದ ದೃಷ್ಟಿಯಿಂದ ರಾಜ್ಯದ ಪ್ರಮುಖ ಸಂಪರ್ಕ ವಲಯಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ಪ್ರತಿದಿನ ನೂರಾರು ಮಂದಿ ಉದ್ಯೋಗ, ಉನ್ನತ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ಬೆಂಗಳೂರಿಗೆ ತೆರಳುತ್ತಿದ್ದು, ಹೆಚ್ಚುತ್ತಿರುವ ಬಸ್ ಪ್ರಯಾಣ ದರದ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದ ಹಾಗೂ ಸುಗಮ ರೈಲು ಸೇವೆಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ತಿಳಿಸಲಾಗಿದೆ.ಪ್ರಸ್ತುತ ಟ್ರೈನ್ ನಂ. 06583 ಬೆಳಿಗ್ಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ಹಾಸನ ತಲುಪುತ್ತಿದ್ದು, ಟ್ರೈನ್ ನಂ. 06584 ಹಾಸನದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದೆ. ಈ ಸೇವೆಯನ್ನು ಸಕಲೇಶಪುರದವರೆಗೆ ವಿಸ್ತರಿಸಿದರೆ ಸಕಲೇಶಪುರ ಮತ್ತು ಆಲೂರು ಭಾಗದ ಜನರಿಗೆ ಪ್ರತಿದಿನದ ಸಂಚಾರ ವ್ಯವಸ್ಥೆ ಇನ್ನಷ್ಟು ಸುಲಭವಾಗಲಿದ್ದು, ಕಡಿಮೆ ವೆಚ್ಚದಲ್ಲಿ ಬೆಂಗಳೂರು ಸಂಪರ್ಕ ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಅಲ್ಲದೆ, ಸಕಲೇಶಪುರ ತಾಲ್ಲೂಕಿನ ಗಡಿಭಾಗಗಳಿಗೆ ಹೊಂದಿಕೊಂಡಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಾರ್ವಜನಿಕರಿಗೂ ಈ ರೈಲು ಸೇವೆಯಿಂದ ಪ್ರಯೋಜನ ದೊರೆಯಲಿದ್ದು, ಮಲೆನಾಡು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.ಇದೇ ವೇಳೆ ರೈಲು ಮಾರ್ಗ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ ಶಾಸಕರು, ಆಲೂರು ತಾಲ್ಲೂಕಿನ ಮಡಬಲು, ಯಡೂರು ಹಾಗೂ ಸಕಲೇಶಪುರ ವ್ಯಾಪ್ತಿಯ ಹೊಸೂರು ಭಾಗಗಳಲ್ಲಿ ರೈತರು, ಸಾರ್ವಜನಿಕರು ಹಾಗೂ ವಾಹನ ಸಂಚಾರದ ಸುರಕ್ಷತೆಗೆ ಅಗತ್ಯ ಅಂಡರ್‌ಪಾಸ್‌ಗಳನ್ನು ನಿರ್ಮಿಸುವಂತೆ ಒತ್ತಾಯಿಸಿದರು.ಅದರ ಜೊತೆಗೆ, ಸಕಲೇಶಪುರ–ಅರೇಹಳ್ಳಿ ಮಾರ್ಗವಾಗಿ ಬೇಲೂರಿಗೆ ಸಂಪರ್ಕ ಕಲ್ಪಿಸುವ ಆಚಂಗಿ ಸಮೀಪದ ರೈಲ್ವೆ ಮೇಲ್ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಂದ ಮಳೆಗಾಲದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸಚಿವರ ಗಮನ ಸೆಳೆದರು.ಕ್ಷೇತ್ರದ ಜನರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದಿಸಿ ರೈಲು ಸೇವೆ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದಾರೆ.

