
ಸಕಲೇಶಪುರ: ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಪರಿಹಾರ ಯೋಜನೆಗಳಡಿ ಸಲ್ಲಿಕೆಯಾಗಿರುವ ಪ್ರಕರಣಗಳ ತ್ವರಿತ ಹಾಗೂ ವಾಸ್ತವಾಧಾರಿತ ನಿರ್ಣಯಕ್ಕಾಗಿ ಸಂತ್ರಸ್ತ ರೈತರ ಮನೆಬಾಗಿಲಿನಲ್ಲೇ ಉಪವಿಭಾಗ ಮಟ್ಟದ ಸಮಿತಿಯ ಸಭೆಯನ್ನು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಯಸಳೂರು ಹೋಬಳಿಯ ಸಂತಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು.ಸಭೆಯಲ್ಲಿ ತಹಶೀಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರು, ಸಹಾಯಕ ನಿಬಂಧಕರು (ಸಹಕಾರ ಇಲಾಖೆ), ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಪ್ರಕರಣಗಳ ಕುರಿತು ಸ್ಥಳದಲ್ಲಿಯೇ ಸಮಾಲೋಚನೆ ನಡೆಸಿದರು.

ಸಭೆಯ ಪ್ರಾರಂಭದಲ್ಲಿ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ. ಮಾತನಾಡಿ, ಸರ್ಕಾರ ಹಾಗೂ ಇಲಾಖೆಗಳು ಸದಾ ರೈತರ ಬೆಂಬಲಕ್ಕೆ ನಿಂತಿವೆ ಎಂದರು. ರೈತರ ಆತ್ಮಹತ್ಯೆ ಯೋಜನೆ ಪ್ರೋತ್ಸಾಹಾತ್ಮಕ ಯೋಜನೆ ಅಲ್ಲ, ಅದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪರಿಹಾರ ಒದಗಿಸುವ ಯೋಜನೆ ಎಂದು ಸ್ಪಷ್ಟಪಡಿಸಿದರು.ಸಭೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಾದ ಸಂತಹಳ್ಳಿ ಗ್ರಾಮದ ದಿವಾಕರ ಎಸ್.ಜಿ. ಹಾಗೂ ಗೊದ್ದು ಗ್ರಾಮದ ತಿಪ್ಪೇಗೌಡ ಬಿ.ಕೆ. ಅವರ ಪ್ರಕರಣಗಳನ್ನು, ಜೊತೆಗೆ ಆಕಸ್ಮಿಕ ಮರಣ ಪ್ರಕರಣಗಳಾದ ಕರಗೂರು ಗ್ರಾಮದ ಕೆ.ಎನ್. ಪ್ರಕಾಶ್ ಹಾಗೂ ಚಿಗನಹಳ್ಳಿ ಗ್ರಾಮದ ನಂಜಯ್ಯ ಅವರ ಪ್ರಕರಣಗಳನ್ನು ದಾಖಲೆಗಳೊಂದಿಗೆ ಮಂಡಿಸಿ ಪರಿಶೀಲಿಸಲಾಯಿತು.ನಂತರ ಮಾತನಾಡಿದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಸಂತ್ರಸ್ತರ ಮನೆ ಹಾಗೂ ಕೃಷಿ ಜಮೀನಿನವರೆಗೆ ಅಧಿಕಾರಿಗಳು ತೆರಳಿ ಸಮಾಲೋಚನೆ ನಡೆಸುವುದರಿಂದ ಸರ್ಕಾರ ಅವರೊಂದಿಗೆ ಇದೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಜೊತೆಗೆ ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಸ್ಥಳದಲ್ಲಿಯೇ ಮಾಹಿತಿ ನೀಡಿ ನೆರವು ಒದಗಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಅಧಿಕಾರಿಗಳು ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಸರ್ಕಾರದಿಂದ ಲಭ್ಯವಾಗುವ ಶಿಕ್ಷಣ ಪ್ರೋತ್ಸಾಹ, ಶುಲ್ಕ ರಿಯಾಯಿತಿ, ವಸತಿ ಶಾಲೆಗಳಲ್ಲಿ ಪ್ರವೇಶ ಅವಕಾಶ ಹಾಗೂ ಕೃಷಿ ಇಲಾಖೆಯ ವಿವಿಧ ಸಹಾಯಧನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಅಂತಿಮವಾಗಿ ದಾಖಲೆಗಳು ಹಾಗೂ ಸ್ಥಳ ಪರಿಶೀಲನೆ ಆಧರಿಸಿ ಎರಡು ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರಧನ ಮಂಜೂರಾತಿಗೆ ಶಿಫಾರಸು ಮಾಡಲಾಗಿದ್ದು, ಎರಡು ರೈತರ ಆಕಸ್ಮಿಕ ಮರಣ ಪ್ರಕರಣಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಲು ಸಮಿತಿ ಶಿಫಾರಸು ಮಾಡಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾರ್ತಿಕ್, ಸಹಕಾರ ಇಲಾಖೆಯ ಮಾರಾಟಾಧಿಕಾರಿ ಮಂಜುನಾಥ್, ತಾಂತ್ರಿಕ ಅಧಿಕಾರಿ ಅಜಿತ್ ಪ್ರಸಾದ್, ಕೃಷಿ ಅಧಿಕಾರಿ ಕೇಶವಮೂರ್ತಿ, ರೆವೆನ್ಯೂ ನಿರೀಕ್ಷಕ ಮಹದೇವಸ್ವಾಮಿ, ತಾಂತ್ರಿಕ ವ್ಯವಸ್ಥಾಪಕ ರಾಥೋಡ್, ಸಹಾಯಕ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ನಾಯಕ್, ಗ್ರಾಮ ಆಡಳಿತಾಧಿಕಾರಿಗಳಾದ ಮೋಹನ್ ಕುಮಾರ್, ಕೋಟ್ರೇಶ್, ಸಲ್ಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸಭೆಯ ಅಂತ್ಯದಲ್ಲಿ ಸಂತ್ರಸ್ತ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

